ಏಡಿ ನೆಬ್ಯುಲ: ವೃಷಭರಾಶಿಯ ಹಿನ್ನೆಲೆಯಲ್ಲಿ ದೂರದರ್ಶಕದ ಸಹಾಯದಿಂದ ಕಾಣಸಿಗುವ ಒಂದು ಅನಿಯತ (ಇರ್ರೆಗ್ಯುಲರ್) ನೆಬ್ಯುಲ (ಕ್ರ್ಯಾಬ್ ನೆಬ್ಯುಲ). ಮೊದಲಿಗೆ ಐರ್ಲೆಂಡಿನ ಲಾರ್ಡ್ ರಾಸ್ (1800-1867) ಎಂಬ ಖಗೋಳವಿಜ್ಞಾನಿ ಇದನ್ನು ಪರಿಶೀಲಿಸಿ (1848) ಇದು ವೃತ್ತಾಕಾರದಲ್ಲಿ ಆವರ್ತಿಸುತ್ತಿದೆ, ಇದರ ಮೇಲ್ಮೈಯಿಂದ ಹೊರಹೊಮ್ಮುವ ಅನಿಲಗಳು ಏಡಿಯ ಕಾಲುಗಳಂತಿವೆ, ಇದು ದಿನೇ ದಿನೇ ಹಿಗ್ಗುತ್ತಿದೆ ಎಂದು ತಿಳಿಸಿದ. ಇದಕ್ಕೆ ಕ್ರ್ಯಾಬ್ (ಎಂದರೆ ಏಡಿ) ನೆಬ್ಯುಲ ಎಂದು ಹೆಸರಿತ್ತವನು ಇವನೇ. ಹಳೆಯ ಚೀನೀ ವರದಿಗಳ 
ಪ್ರಕಾರ 1054ರ ಜುಲೈ 4 ರಂದು ಒಂದು ಅಪುರ್ವ ನಕ್ಷತ್ರ ವೃಷಭರಾಶಿಯಲ್ಲಿ ಕಾಣಿಸಿಕೊಂಡು, ಸುಮಾರು ಒಂದು ವರ್ಷದ ಅನಂತರ ಕ್ರಮೇಣ ಕಾಣದಾಯಿತು. ಚೀನೀ ವಿದ್ವಾಂಸರು ಸೂಚಿಸಿದ ಈ ಸ್ಥಳದಲ್ಲಿ ಏಡಿ ನೆಬ್ಯುಲ ಇರುವುದು ಸ್ಥಿರಪಟ್ಟಿದೆ. ಈ ನಕ್ಷತ್ರ ನೋವ ಅಥವಾ ಮಹಾನೋವ ಆಗಿ ಅಸ್ಫೋಟಿಸಿರಬೇಕು, ಆಗಿನ ಇದರ ಕಾಂತಿವರ್ಗ-16 ಇದ್ದಿರಬೇಕೆಂದು ಊಹಿಸ ಲಾಯಿತು. ಇದರ ಅವಶೇಷವೇ ಈ ಏಡಿನೆಬ್ಯುಲ ಎಂದು ತೀರ್ಮಾನಿಸಿದ್ದಾರೆ. ಕೇಂಬ್ರಿಜ್ ವಿಶ್ವ ವಿದ್ಯಾನಿಲಯದ ವಿಜ್ಞಾನಿ ಫ್ರೆಡ್ ಹಾಯ್ಲ್‌ನ ಗಣನೆಯಂತೆ ಇದು  1045ರಲ್ಲಿ ಸ್ಫೋಟಗೊಂಡು ಮಹಾನೋವ ಆಗಿರಬಹುದು. ಇದರ ಛಾಯಾಚಿತ್ರಗಳ ಅಧ್ಯಯನ ಮತ್ತು ಧ್ರುವೀಕರಣ ಅಳತೆಗಳಿಂದಾಗಿ ಈ ನೆಬ್ಯುಲದ ಒಳ ಭಾಗದಲ್ಲಿ ಕಾಂತಕ್ಷೇತ್ರವಿದೆ ಎಂಬುದು ತಿಳಿದುಬಂದಿದೆ. ಏಡಿನೆಬ್ಯುಲ ಒಂದು ಎಕ್ಸ್‌ಕಿರಣಾಕರವೂ ಹೌದು 

(ನೋಡಿ- ಎಕ್ಸ್‌ಕಿರಣ-ಖಗೋಳಶಾಸ್ತ್ರ). ಸೂರ್ಯನಿಂದ ಏಡಿನೆಬ್ಯುಲದ ದೂರ ಸು. 6,000 ಜ್ಯೋತಿರ್ವರ್ಷಗಳೆಂದು ಅಂದಾಜು ಮಾಡಲಾಗಿದೆ. ನೆಬ್ಯುಲದ ವ್ಯಾಸ ಸುಮಾರು 3 ಜ್ಯೋತಿರ್ವರ್ಷಗಳು. ನೋಡುವ ದಿಕ್ಕಿನ ನೇರಕ್ಕೆ ಲಂಬವಾಗಿ ಸೆಕೆಂಡಿಗೆ ಸುಮಾರು 1,300 ಕಿಮೀಗಳ ದೂರದಲ್ಲಿ ಇದು ಹಿಗ್ಗುತ್ತಿದೆ. ಏಡಿ ನೆಬ್ಯುಲದ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಯ ಶೇ.10 ರಷ್ಟು ಇದೆ. ಭೂಮಿಯ ಮೇಲೆ ಕಾಣಬರುವ ವಿಶ್ವ ಕಿರಣಗಳ ಆಕರ-ಈ ಏಡಿ ನೆಬ್ಯುಲ ಎಂಬುದು ಕೆಲವು ವಿಜ್ಞಾನಿಗಳ ಮತ. 	      

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ